ಅನುಭವ

Standard

ಅನುಭವ

ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ

ಜನಿಮರಣಂಗಳಲ್ಲೂ ಇಹಪರಂಗಳಲ್ಲೂ (೨)
ಬಿಡದಲೆ ಕಾಯುತ್ತ ದಾರಿಗಾಣಿಸಿದೆ
ಹೊಸತನು ಅರಿತಾಗ ಹಳತನು ತೊರೆದಾಗ
ಅಪರವೆಂಬುದು ಕಾಣೆ ನಿನ್ನ ಸೃಷ್ಟಿಯೊಳಗೆ
ನಿನ್ನನು ಅರಿತಾಗ ಮುಚ್ಚಿದ್ದು ತೆರೆದಾಗ
ನೀನೇ ನೀನಿದ್ದುದ ಕಂಡೆ ನಿನ್ನ ಸೃಷ್ಟುಯೊಳಾಗೆ

ಬರಿದೊಂದು ಸ್ಪರ್ಶದ ಮೋಹಕ ಮಾಯೆಯಲಿ
ಅರಿಯದ ತೀರದೊಳು ಎನ್ನ ತಂದು ಕೂರಿಸಿದೆ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ

Advertisements

ಬಂದೇ ಬರುವುದು

Standard

ಬಂದೇ ಬರುವುದದೊಂದು ದಿನ ಭೂಮಿಯೊಳು
ಜೀವಮೌನದ ಭಾವ ಸಾಂದ್ರತೆಯನಡರ್ದು
ಕಣ್ಣ ಪಟಲದ ಮುಂದೆ ಬಿರಿದು ನಕ್ಷತ್ರಗಳು
ಉದಯದೊಳು ಮಗುದೊಮ್ಮೆ ದಿನಚರಿಯ ಬಿಡದೆ

ಕಡಲ ತೀರದೊಳು ಬಡಿ-ಬೀಸುತಲೆಗಳು
ನೋವಿನೊಳೂ ನಲಿವಿನೊಳೂ ಭೇದಗಳನ್ನೆಣಿಸದೆಯೆ
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ಅಪರೂಪದಾ ತಾಣ ಅಪರೂಪದಾ ಜೀವ
ಅಂತರಾತ್ಮದ ಭಾವ ನಿಜದಿ ಬಯಸಿದುದನ್ನುಳಿದು
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ತೇಲುದೋಣಿ

Standard

ತೇಲುದೋಣಿಯ ತೆರದೆ ತೇಲುತೇಲುತ ಸಾಗಿ
ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ
ಹಗರಣದ ರಗಳೆಯದಾವುದೊಂದನ್ನರಿಯದಿರೆ ||

ತೀರವಿಲ್ಲದ ಕಡಲ ನಡುನಡುವೆ ಮೌನದಲಿ
ಮಂದಹಾಸದ ಗಾನ ಗುನುಗುನುಗುತ್ತಿರುವಾಗ
ಕೇಳಬಯಸಿದೆ ಪದವ ಮೀರಿದ ಮಧು ಮಧುರತಮ ಗಾನ ||

ಕಾಲ ಬಾರದದೇಕೋ ಕಾರ್ಯ ತೀರದದಿನ್ನೇಕೋ
ಸಂಜೆಯಾಗಸ ಕೆಂಪು ಕೆಂಪನೆ ಮಸೆವಾಗ
ಮಸುಮಸುಕಿನಾ ಬೆಳಕು ಮೋಡದಲಿ ಮರೆಗೊಳಲು
ತೇಲ್ವ ದೋಣಿಯ ಹುಟ್ಟದಲುಗಾಡದಿರದೇ ||

ಕಾಲವೇ ಚಲಿಸು ಹಿಂದಕ್ಕೆ

Standard

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||

ಮೂಡಬಾಂದಳದೆ ತೇರನ್ನೇರಿದ ಆದಿತ್ಯದೇವನ ಸಂಗದೆ |
ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು | ಬಿಡುವಿರದೆ ||

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಜವ್ವನವ ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮುಪ್ಪು ಬಾರದೊಲರಳಿಸು ||

ಕೞೆದುಹೋಗಿಹ ದಿನಗಳೆಲ್ಲದರ ಆನಂದವ ಕೊಡು ಹಿಂದಕ್ಕೆ |
ಕಾಣುತ್ತಿದ್ದರೂ ಕೈಗೆ ಎಟಕದ ಕನಸನ್ನೂ ಕೊಡು | ಬಿಡುವಿರದೆ ||

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||

ಪಡುವ ಬಾಂದಳದೆ ತೇಲುತ್ತಿಪ್ಪ ಆ ತುಂಬುತಿಂಗಳ ಚಂದದೆ |
ಸುರಿಯುತ್ತಿದ್ದರೂ ಮೆಯ್ಗೆ ಸೋಕದ ಬೆಳ್ವೊನಲನ್ನು ಕೊಡು | ಬಿಡುವಿರದೆ ||

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಭೂತಕಾಲದ ಭವಿತನಿಧಿಗಳ ಕಳೆದುಹೋದ ಕೀಲಿಗೊಂಚಲನ್ನು |

ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ದಯೆಯಿರಲಿ ||

 

ವೈಷ್ಣವ ಬಂಧು

Standard

ವೈಷ್ಣವ ಬಂಧುವೆಂದವನನೇ ಕರೆವರು
ಪರರ ದುಃಖಗಳನ್ನರಿತವನ
ದುರ್ಬಲರಿಗೆ ಉಪಕರಿಸುವನವನು
ಮನದೊಳು ಅಭಿಮಾನವ ತಾಳದೆಯೇ

ಎಲ್ಲವರೊಡ ಸಹನೆಯಿಂದೇಗುತ್ತ
ಯಾರನ್ನೂ ತೆಗಳದೆ ಜೀವಿಸುವ
ನಡೆನುಡಿಯಿಂ ಸಮಚಿತ್ತನವನು
ಆ ವೈಷ್ಣವನವ್ವೆಯೋ ಧನ್ಯೆಯಲ

ನೇರದೃಷ್ಟಿಯವ ದಾಹವ ತೊರೆದವ
ಪರಸ್ತ್ರೀಯರು ಮಾತೆಯರೆಂಬವ
ನಾಲಗೆಯಿಂದ ಅಸತ್ಯವ ನುಡಿಯನು
ಪರಸ್ವತ್ತುಗಳ ತೊಡದವನು

ಮೋಹಮಾಯೆಯೊಳು ಮುಳುಗಿರದವನು
ದೃಢವೈರಾಗ್ಯವ ತಾಳ್ದವನು
ರಾಮನಾಮವೇ ಅಮೃತವವನಿಗೆ
ಧಾಮಂಗಳೆಲ್ಲವ ಧ್ಯಾನಿಸಿರೆ

ದುರಾಶೆಯ ತಾಳನು ಕಪಟರಹಿತನು
ಕಾಮಕ್ರೋಧವ ನಿವಾರಿಸಿದವನು
ಕುಲವ ಉದ್ಧರಿಸುವನವನನ್ನೇ ಕಾದಿಹೆ
ದೀನ ನರಸಯ್ಯ ನಾನು ದರುಶನಕೆ

ಮೂಲಸಾಹಿತ್ಯ – ನರಸಿಂಹ ಮೆಹತಾ, ವೈಷ್ಣವ ಜನತೋ ತೇನೇ ಕಹಿಯೇ.

ಮಳೆ

Standard

ಮಳೆ

ಎಡೆಬಿಡದೆ ಸುರಿಯುವ ಮಳೆಗೆ
ಕೊಚ್ಚಿಹೋದುವು ಹಲವೂ
ಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆ

ಕೊನೆಯಿರದ ಸುರಿತದ ನಡುವೆ
ಕೊನೆಗಂಡಿತಂದು ಮಳೆಯೂ
ಇನ್ನೊಮ್ಮೆ ಬಾರದೇ ಆಷಾಢ ಮಾಸ

ಸುಡುವ ಬೇಗೆಯ ಬಿಸಿಗೆ
ಒಣಗಿ ಮರ-ಗಂಟಿಗಳು
ಇನ್ನೊಮ್ಮೆ ಕೊನರುವುದೇ ಕನಲಿರುವ ಕೊಂಬೆ

ತನ್ನದಿರೆ ತನ್ನದೆಂದೂ
ಅನ್ಯವಿರೆ ಪರವೆಂದೂ
ಅನ್ಯವನ್ನೊ ಳಗೊಂಡೀತೇ ಮುರುಟಿರುವ ಮಾನಸ

ವ್ರಣ

Standard

ವ್ರಣ

ನಿನ್ನನರಿತೆನು ಎಂದು
ತಿಳಿದಿದ್ದೆ ನಾನಂದು
ನಮ್ಮ ದೇಹಗಳ ನಾವರಿತುಕೊಂಡ ಹಾಗೆ

ಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆ
ಇನ್ನೊಂದು ಸ್ಪರ್ಶದಲಿ ನೋವನೀವಂತೆ
ಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನು

ಭ್ರಮೆ ಕಳಚಿತೊಂದು ದಿನ
ತಿಳಿಯಲಾರದೆ ಹೋದೆ
ನನ್ನ ದೇಹವನೇ ನಾನರಿಯಲಿಲ್ಲ

ಮೇಲುಹರಿವಿನ ಮಂಜು
ನಿಜದಲ್ಲಿ ಹಿರಿದೆಂದು
ಮಂಜುಗುಡ್ಡೆಯ ಗಾತ್ರಾ ನಾನರಿಯಲಿಲ್ಲ

ಹೊರಗೆ ಕಾಣುವ ಪೊರೆಯ
ಒಳಗನರಿಯದೆ ಹೋದೆ
ಒಳಗೆ ಬೆಳೆದಿದ್ದ ವ್ರಣಾ ನಾನರಿಯಲಿಲ್ಲ

ಮಂಜುಗುಡ್ಡೆ = iceberg

ಜೀವವಾಹ

Standard

ಜೀವವಾಹ

ಹಗಲಿರುಳು ಎಡೆಬಿಡದೆ
ನನ್ನೊಳಗೆ ನನ್ನಂತೆ
ಹರಿವ ಜೀವದ ವಾಹ ನೀನಲ್ಲವೇ

ಮಣ್ಣ ಕಣ-ಕಣದಿಂದ
ಸ್ಫುರಣಗೊಳೆ ಭವವಾಗಿ
ಅರಳ್ವ ಜೀವದ ವಾಹ ನೀನಲ್ಲವೇ

ಅಳವಿರದಾ ಕಾಶದಿಂದ
ಹರಿವ ಬಲ್ಝರಿಯಂತೆ
ಸುರಿವ ಜೀವದ ವಾಹ ನೀನಲ್ಲವೇ

ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟನೀಯುವ ವಾಹ ನೀನಲ್ಲವೇ

ಚಣಚಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನಲ್ಲವೇ

ಎಲ್ಲೆ

Standard

ಎಲ್ಲೆ ಮೀರಿದ ಕ್ಷಣವ
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ

ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು

ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು

ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು

ತಿರುಗಿನೋಡಿದ ಮೋರೆ

Standard

ತಿರುಗಿನೋಡಿದ ಮೋರೆ ಮರೆಯಾಗಿ ಹೋಯ್ತೇಕೆ
ತಿರುಗೆ ತಿರುತಿರುಗಿ ನೋಡದೇಕೆ

ಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು
ತನ್ನ ಮೆಯ್ಯ ಮಾಟವನ್ನು ತೋರದೇಕೆ

ಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳು
ತಂತಮ್ಮ ಗಮ್ಯಗಳ ಸೇರವೇಕೆ

ಕೊನೆಯ ಕೊಳ್ಳುವನ್ನಕ ಇಡಿದಿಡಿವ ಚಾಣಗಳು
ಅರೆಯಿಂದ ರೂಪೊಂದ ಕಡೆಯವೇಕೆ

ಮತ್ತೆ ಒರೆಯುವ ಮುನ್ನ ತಡವರಿಸಿ ಮಾತುಗಳು
ಪಿಸಿಯುತ್ತ ತಾವ್ತಾವೇ ಉಲಿಯವೇಕೆ

ಮತ್ತೆ ಕರೆಯುವ ಮುನ್ನ ಕರೆದಿದ್ದ ಧ್ವನಿಗಳು
ತಂತಮ್ಮ ಜಾಡುಗಳ ತೋರವೇಕೆ